Friday, January 8, 2010

ಬೆನ್ನು ತಟ್ಟಲು ಸಂತಸ


"ನೋಡುವಾಗ ತುಂಬಾ ಸರಳ ಅನಿಸುತ್ತದೆ. ಆದರೆ ನಾವ್ಯಾರೂ ಇಂಥ ಉಪಕರಣ ಮಾಡಿಲ್ಲ" ಪುತ್ತೂರು ಬಳಿಯ ವೀರಮಂಗಲದ ಸುಲೈಮಾನ್ ಅಭಿವೃದ್ಧಿಪಡಿಸಿದ ಅಡಿಕೆ ಹೆಕ್ಕುವ ಉಪಕರಣ (ಅಡಿಕೆ ಪತ್ರಿಕೆ, ಜನವರಿ 2010, www.adikepatrike.com) ನೋಡಿ ಬೆನ್ನು ತಟ್ಟಿ ತಮ್ಮ ಅಂಗಡಿಯಲ್ಲಿ ಇಡಲು ಕರೆ ಕೊಟ್ಟ ಪುತ್ತೂರಿನ ಕೃಷ್ಣ ಮರ್ಚಂಟ್ಸ್ ನ ನಿತ್ಯಾನಂದರ (೦೮೨೫೧-೨೩೦೩೦೮) ಉದ್ಗಾರ.

ಅಡಿಕೆ ಪತ್ರಿಕೆ ಬಳಗದ ಪತ್ರಕರ್ತ ಬಾಲಚಂದ್ರ ಹೆಗಡೆ ಸಾಯಿಮನೆ ಈಗ ಜರ್ಮನಿಯಲ್ಲಿ ಅಧ್ಯಯನ ಪ್ರವಾಸದಲ್ಲಿದ್ದಾರೆ. ಅವರು ಬರೆಯುತ್ತಾರೆ, ಸುಲೈಮಾನ್ ಅವರ ಉಪಕರಣದಂತಹದೊಂದನ್ನು ಇಲ್ಲಿನ ಪೌರ ಕಾರ್ಮಿಕರು ಕಸ ಹೆಕ್ಕಲು, ನಾಯಿಯ ತ್ಯಾಜ್ಯ ಎತ್ತಿ ಶುಚಿ ಮಾಡಲು ಬಳಸುತ್ತಾರೆ. ಇಲ್ಲಿನ ಯಂತ್ರಕ್ಕೆ ಮೂರೂವರೆಯಿಂದ ಐದು ಸಾವಿರ ಬೆಲೆಯಿದೆ. ಅದನ್ನು 250 ರೂಪಾಯಿಗೆ ಮಾಡಿದ ಸುಲೈಮಾನರಿಗೆ ಅಭಿನಂದನೆ.

ಸುಲೈಮಾನ್ ಈಗ ಅಡಿಕೆ ಸುಲಿ ಉಪಕರಣವೊಂದನ್ನು ತಯಾರಿಸಿದ್ದಾರೆ. ಇದನ್ನು ಅಡಿಕೆ ಪತ್ರಿಕೆ ಕಚೇರಿಯಲ್ಲೇ ಬಿಡುಗಡೆ ಮಾಡಬೇಕೆಂಬುದು ಅವರ ಹಾರೈಕೆ. ಇದನ್ನು ಬಿಡುಗಡೆಗೊಳಿಸುತ್ತಾ ಅಪ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ಕೃಷಿಕರ ಶ್ರಮ ಉಳಿಸುವ ಉಪಕರಣಗಳು ಹೆಚ್ಚುಹೆಚ್ಚು ಬರಲಿ ಎಂದು ಹಾರೈಸಿದರು.

ಹೌದು. ಅನ್ನದಾತನ ಅಧ್ವಾನ ಕುಗ್ಗಿಸುವ ಅದೇನೇ ಉಪಕರಣ ಯಾರೇ ಹೊರತಂದರೂ ಅದಕ್ಕೆ ಬೆಳಕೊಡ್ಡುವ ಮೂಲಕ ಬೆನ್ನು ತಟ್ಟುವುದರಲ್ಲಿ ನಮಗೆ ಪ್ರತ್ಯೇಕ ಸಂತೋಷವಿದೆ.

ನಮ್ಮ ನೆನಪಿನ ಸಂಚಿ ದೊಡ್ಡದಿದೆ. ಅದರಿಂದ ಆಯ್ದ ಎಸಳುಗಳು ಒಂದೊಂದಾಗಿ ಇಲ್ಲಿ ಬೆಳಕು ಕಾಣಲಿವೆ. ಇಪ್ಪತ್ತೆರಡರ ಅಡಿಕೆ ಪತ್ರಿಕೆಯ ಸಂಚಿಕೆಗಳು ರೂಪುಗೊಳ್ಳುವುದರ ನಡುವೆ ನೇಪಥ್ಯದಲ್ಲಿ ಆಚೀಚೆಗಿನ ಮೆಲುಕುಗಳಿಗೆ ಈ ಬ್ಲಾಗು ಮೀಸಲು.

ಓದುಗರ ಆಯ್ದ ಅನುಭವ, ಬರಹ - ಹೀಗೆ ಇದು ನಮ್ಮನಿಮ್ಮ ನೆಚ್ಚಿನ ಅಪ ಸಂಬಂಧದ ಹತ್ತಾರು 'ಮರೆಯುವಷ್ಟು ಚಿಕ್ಕದಲ್ಲದ' ವಿಚಾರಗಳಿಗೆ ತೆರೆದ ವೇದಿಕೆಯೂ ಹೌದು.
- ಶ್ರೀ