Friday, March 27, 2015

ಬಂಟ್ವಾಳದಲ್ಲಿ ಹಲಸಿನ ಸಂತೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹಲಸು ಪ್ರೇಮಿ ಕೂಟದವರ ಆಯೋಜನೆಯಲ್ಲಿ ಹಲಸು ತಳಿ ಆಯ್ಕೆ, ಹಲಸಿನ ಸಂತೆ.
ಸಂಪರ್ಕ : ಮೌನೀಶ್ ಮಲ್ಯ - 93438 99767

Monday, March 23, 2015

ಕರಾವಳಿಯ ಅತ್ಯಾಧುನಿಕ ಎಣ್ಣೆ ಗಿರಣಿ ‘ಕೋಕೊಗುರು’

                                                                             ಆಡಳಿತ ನಿರ್ದೇಶಕ ಕೇಶವರಾಮ್



ಚಿತ್ರ, ನುಡಿಚಿತ್ರ : ಪಡಾರು

ಕೃಷಿಕರಿಂದಲೇ ತೆಂಗು ಕೊಳ್ಳುವ ನೀತಿ ಕಾಯ್ದುಕೊಂಡಿರುವ ಈ ಸಂಸ್ಥೆಯಿಂದಾಗಿ ಸ್ಥಳೀಯ ಕೃಷಿಕರಿಗೆ ಒಳ್ಳೆ ಮಾರುಕಟ್ಟೆ ಸಿಕ್ಕಿದೆ.

ಪುತ್ತೂರಿನ ಹೊರವಲಯದ ಕಲ್ಲರ್ಪೆಗೆ ಬನ್ನಿ. ಇಲ್ಲಿ ಒಂದೆಡೆ ಪ್ರತಿದಿನ ನಲುವತ್ತು ಸಾವಿರ ತೆಂಗು ಹಿಂಡಿ ಹಿಪ್ಪೆಯಾಗಿ ಎಣ್ಣೆಯಾಗುತ್ತದೆ. ಬೆಳಗ್ಗೆ ಕೊಬ್ಬರಿಯಾಗಿದ್ದದ್ದು ಸಂಜೆ ಹೊತ್ತಿಗೆ ಎಣ್ಣೆಯಾಗಿ ಪೊಟ್ಟಣ ಸೇರಿಕೊಳ್ಳುತ್ತದೆ. .ಕ ಅಥವಾ ನೆರೆಯ ಉಡುಪಿ ಜಿಲ್ಲೆಯ ಯಾವುದೋ ಊರಿಗೆ ತಲಪುತ್ತದೆ. ಮಹಿಳೆಯರ ತಲೆ ತಂಪು ಮಾಡಲು ದೂರದ ಗುಜರಾತಿಗೆ ಹೋಗಲೂಬಹುದು. ಕರಾವಳಿ ಕರ್ನಾಟಕದ ಮೊತ್ತಮೊದಲ ಅತ್ಯಾಧುನಿಕ ತೆಂಗಿನೆಣ್ಣೆ ಘಟಕವಿದು.
ಇಂತಹ ದೊಡ್ಡ ಕಾರ್ಖಾನೆಗಳು ಸಾಮಾನ್ಯವಾಗಿ ಕಚ್ಚಾವಸ್ತು ಪೂರೈಕೆಗೆ ಮಧ್ಯವರ್ತಿಗಳನ್ನೇ ಅವಲಂಬಿಸುತ್ತವೆ. ಏಕೆಂದರೆ ಅದು ಸುಲಭ. ಆದರೆ ಈ ಗಿರಣಿ ಹಾಗಲ್ಲ. ಈಗಲೂ ಕೃಷಿಕರಿಂದ ತೆಂಗಿನಕಾಯಿ, ಕೊಬ್ಬರಿ ಕೊಳ್ಳುತ್ತದೆ. ಕನಿಷ್ಟ 2000 ಕಾಯಿ ಇದ್ದರೆ ಮನೆಯಿಂದಲೇ ನೇರ ವ್ಯಾಪಾರ ಮಾಡುತ್ತೇವೆ ಎನ್ನುತ್ತಾರೆ ಇವರು. ಇದು ಕೋಕೊಗುರು ಎಣ್ಣೆ ಗಿರಣಿಯ ವೈಶಿಷ್ಟ್ಯತೆ. ಸಂಸ್ಥೆಯ ಸ್ಥಾಪಕ ಶಿವಶಂಕರ ಭಟ್ ಬೋನಂತಾಯ (62) ಕೃಷಿಕರು. 
ಇವರ ಉತ್ಪನ್ನದಲ್ಲಿ ರೋಸ್ಟೆಡ್ ಕೊಕೊನಟ್ ಆಯಿಲ್ ವಿಶೇಷದ್ದು. ಹಬೆಯಲ್ಲಿ ಬೆಂದ ಕೊಬ್ಬರಿಯಿಂದ ಎಣ್ಣೆ ತಯಾರಿ. ಎಂಭತ್ತು ಮಂದಿಗೆ ನೇರ ಉದ್ಯೋಗ. ಈ ಸಂಸ್ಥೆಯಿಂದಾಗಿ ಸ್ಥಳೀಯ ತೆಂಗಿನಕಾಯಿ, ಕೊಬ್ಬರಿಗೆ ಉತ್ತಮ ಮಾರುಕಟ್ಟೆ ಸಿಕ್ಕಿದೆ.  ತೆಂಗಿನಕಾಯಿ ಸೀಸನ್ ಪೂರ್ತಿ - ಜನವರಿಯಿಂದ ಜೂನ್ ತನಕ  ಇವರಿಗೆ ಸ್ಥಳೀಯ ಕಚ್ಚಾವಸ್ತು ಸಿಗುತ್ತಿದೆ.  ಮಳೆಗಾಲದಲ್ಲಿ ಮಾತ್ರ ದೂರದ ತಿಪಟೂರು ಕೊಬ್ಬರಿಗೆ ಶರಣು ಹೇಳಬೇಕಾಗಿ ಬರುತ್ತದೆ.
ಮೂರು ವರ್ಷಗಳಲ್ಲಿ (ಆರಂಭ : 2012) ಕಾರ್ಖಾನೆ ಹಂತಹಂತವಾಗಿ ಮೇಲೇರಿದೆ.  ಸೀಸನಿನಲ್ಲಿ ಪ್ರತಿನಿತ್ಯ 12,000 ಲೀಟರ್ ಎಣ್ಣೆ ಉತ್ಪಾದನೆಯಾಗುತ್ತಿದೆ.  .. ಉಡುಪಿ ಜಿಲ್ಲೆಯ ಎಲ್ಲಾ ಪೇಟೆ, ಹಳ್ಳಿಗಳಿಗೂ ಸರಬರಾಜಾಗುತ್ತದೆ.  ನಾಲ್ಕು ವ್ಯಾನ್ ಗಳಿಗೆ ಇದೇ ಕೆಲಸ.  ಮೈಸೂರು ಬೆಂಗಳೂರಿಗೂ ಸರಬರಾಜು ಆಗುತ್ತಿದೆ.  ಹೇರ್ ಆಯಿಲ್ ಆಗಿ ಗುಜರಾತ್ ನಲ್ಲಿಯೂ ಬೇಡಿಕೆ ಇದೆಎನ್ನುತ್ತಾರೆ ಆಡಳಿತ ನಿರ್ದೇಶಕ ಕೇಶವರಾಮ್ ಬೋನಂತಾಯ. ಇವರು ಶಿವಶಂಕರರ ದೊಡ್ಡ ಮಗ.
(ಲೇಖನದ ಪೂರ್ಣಪಾಠ ಜಾಲ ತಾಣದಲ್ಲಿದೆ - www.adikepatrike.com)

ಕೋತಿ ಕಾಟ ತಡೆಗೆ ಸಂತಾನಹರಣ




ಲೇಖನ :  ಶ್ರೀ ಪಡ್ರೆ
ಚಿತ್ರಗಳು : ಡಾ.ಸಂದೀಪ್ ರತನ್

ಲೆಕ್ಕ ಹಾಕಿದರೆ ಬಹುಶಃ ಕರ್ನಾಟಕಕ್ಕೆ ಕೋತಿಕಾಟದಿಂದ ಆಗಬಹುದಾದ ನಷ್ಟ ಹಿಮಾಚಲಪ್ರದೇಶದ್ದರ ಹಲವು ಪಟ್ಟುಗಳಷ್ಟಿರಬಹುದು. ರಾಜ್ಯ ಹಿಮಾಚಲದ ಅನುಕರಣೀಯ ಸಾಧನೆಯನ್ನು ಅನುಸರಿಸಬಾರದೇಕೆ?

ಮಂಗಗಳಿಂದಾಗಿ ಆಗುವ ಬೆಳೆಹಾನಿ ಎಷ್ಟು? ದೇಶದಲ್ಲೇ ಕೋತಿಗಳಿಂದ ಅತಿಹೆಚ್ಚು ಆರ್ಥಿಕ ಹಾನಿಯಾಗುವ ರಾಜ್ಯ ಯಾವುದು? ಈ ಎರಡು ಪ್ರಶ್ನೆಗಳಿಗೂ ಖಚಿತ ಉತ್ತರ ಸಿಗುವುದಿಲ್ಲ.
ಆದರೆ, ಈಗ ಅಂತರ್ಜಾಲದಲ್ಲಿ ಲಭ್ಯ ಮಾಹಿತಿಯ ಆಧಾರದಿಂದ ಹೇಳುವುದಾದರೆ ಹಿಮಾಚಲ ಪ್ರದೇಶ ದೇಶದಲ್ಲೇ ಗರಿಷ್ಠ ಕೋತಿಬಾಧೆಯಿಂದ ಬಳಲುತ್ತಿರುವ ರಾಜ್ಯ. ಬಹುಶಃ ಆ ರಾಜ್ಯದಿಂದ ಹೆಚ್ಚಿನ ಹಾನಿ ವರದಿಯಾಗಿದೆ ಎಂದರೆ ಇನ್ನಷ್ಟು ಸತ್ಯಕ್ಕೆ ಹತ್ತಿರವಾಗಬಹುದು.
ದೇಶದೆಲ್ಲೆಡೆ  ಕೃಷಿಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಇದಕ್ಕೆ ಕಾಡುನಾಶವೇ ಮೂಲ ಕಾರಣ. ಈ ಪ್ರಾಣಿಗಳಿಗೆ ಕಾಡಿನಲ್ಲಿ ಸಿಗಬೇಕಿದ್ದ ಹಣ್ಣುಹಂಪಲು, ಆಹಾರ, ನೀರು ಸಿಗುತ್ತಿಲ್ಲ. ಹೀಗಾಗಿ ಇವು ನಾಡಿಗೆ ಧಾಳಿ ಮಾಡತೊಡಗಿವೆ.
ದುರದೃಷ್ಟದ ವಾಸ್ತವವೆಂದರೆ, ಕೃಷಿಗೆ ಕಾಡುಪ್ರಾಣಿ ಪೀಡೆ ನಿಯಂತ್ರಣದ ಬಗ್ಗೆ ಗಂಭೀರವಾದ ಸಂಶೋಧನೆ ಈ ವರೆಗೆ ಆರಂಭವಾಗಿಲ್ಲ. ಸರಕಾರಗಳು ಇವುಗಳ ಹಾನಿ ಕುಗ್ಗಿಸುವ ಬಗ್ಗೆ ಯಾವುದೇ ಗಂಭೀರ, ಫಲಿತಾಂಶ ನಿರ್ದೇಶಿತ ಕಾರ್ಯಕ್ರಮ ಹಾಕಿಕೊಂಡಂತಿಲ್ಲ.
ಹಿಮಾಚಲ ಪ್ರದೇಶದಲ್ಲಿ ಈ ಸಮಸ್ಯೆ ಗರಿಷ್ಠ ಕಾವು ಪಡೆದುಕೊಂಡಿದೆ. ಅಲ್ಲಿ ಕಳೆದೊಂದು ದಶಕದಿಂದ ಮೇರೆ ಮೀರಿದ ಕೋತಿಕಾಟ ನಿಯಂತ್ರಣದ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ.
2004ರಲ್ಲಿ ನಡೆದ ಮಂಗ ಗಣತಿಯ ಪ್ರಕಾರ ಅಲ್ಲಿ 3.17 ಲಕ್ಷ ಕೋತಿಗಳಿದ್ದುವು. ಈಗಿನ ಸಂಖ್ಯೆಯ ವಿವರ ಲಭ್ಯವಿಲ್ಲ. ಆಗಿದ್ದುದರ ಸರಿ ದುಪ್ಪಟ್ಟು ಇರಬಹುದು ಎನ್ನುವುದು ಒಂದು ಊಹೆ.

(ಲೇಖನದ ಪೂರ್ಣ ಪಾಠಕ್ಕೆ ಜಾಲತಾಣ ನೋಡಿ - www.adikepatrike.com)

ಕೃಷಿ ಇಲಾಖೆಯ ಸಂವಹನದ ಪುನರುಜ್ಜೀವನವಾಗಲಿ


                                ಫೇಸ್ ಬುಕ್ಕಿನ ಕೃಷಿಭವನಗಳ ಪುಟಗಳಲ್ಲಿ ಕಾಣಸಿಗುವ ತರಕಾರಿ ಕೃಷಿಯ ಕಣ್ತುಂಬುವ ದೃಶ್ಯಗಳು


            ಕೇರಳದಲ್ಲಿ ಪ್ರತ್ಯೇಕ ತೋಟಗಾರಿಕಾ ಇಲಾಖೆ ಇಲ್ಲ. ಕೃಷಿ ಇಲಾಖೆಯೇ ಕೃಷಿ, ತೋಟಗಾರಿಕೆ ಎರಡರ ಕೆಲಸವನ್ನೂ ನಿಭಾಯಿಸುತ್ತಿದೆ. ಹಾಗೆಯೇ ಈ ರಾಜ್ಯದಲ್ಲಿ ಬಹುಶಃ ಬೇರೆ ರಾಜ್ಯಗಳಲ್ಲೆಲ್ಲೂ ಇಲ್ಲದ ಒಂದು ಸರಕಾರಿ ಸಂಸ್ಥೆಯಿದೆ. ಫಾಮರ್  ಇನ್ಫಾಮರೇಶನ್ ಬ್ಯೂರೋ - ಎಫ್ಐಬಿ.
              ಕೃಷಿಕರಿಗೆ ಕಾಲಕಾಲಕ್ಕೆ ಅವಶ್ಯಕವಾದ ಮಾಹಿತಿಯನ್ನು ಒದಗಿಸುವುದೇ ಎಫ್ಐಬಿಯ ಕೆಲಸ. ಫಾರ್ಮರ್ ಇನ್ಫಾರ್ಮೇಶನ್ ಬ್ಯೂರೋದ ಅಡಿ ಬರುವ ಕಿಸಾನ್ ಕೇರಳ ಎಂಬ ಘಟಕ ಕೃಷಿಯಲ್ಲಿ ಸಾಧನೆ ಮಾಡಿದವರ, ಹೊಸಹೊಸ ತಂತ್ರಜ್ಞಾನ, ಕೃಷಿಕ್ರಮಗಳ ಬಗ್ಗೆ ದೂರದರ್ಶನಕ್ಕಾಗಿ ತುಂಬ ಮಾಹಿತಿಪೂರ್ಣ ಸಾಕ್ಷ್ಯಚಿತ್ರಗಳನ್ನು ತಯಾರಿಸುತ್ತದೆ.
               ಸಾಮಾನ್ಯವಾಗಿ ಸರಕಾರಿ ವ್ಯವಸ್ಥೆಯಲ್ಲಿರಬಹುದಾದ ಇತರ ಕೊರತೆ, ಜಡಭರತತನ ಇಲ್ಲಿಯೂ ಇದೆ, ಇಲ್ಲವೆಂದಲ್ಲ. ಆದರೂ, ನಮ್ಮೆದುರು ಇಂದು ಇರುವ ಮಾಹಿತಿ ತಂತ್ರಜ್ಞಾನದ ಹೊಸಹೊಸ ಸಾಧ್ಯತೆಗಳನ್ನು ಬಳಸುವಲ್ಲಿ ಕೇರಳದ ಸರಕಾರಿ ಇಲಾಖೆ ಮುಂದೆ ನಿಂತಿದೆ. ಈ ಮಾತಿಗೆ ದೃಷ್ಟಾಂತವಾಗಿ ನಾನು ಈಚೆಗೆ ಗಮನಿಸಿದ ಇನ್ನೊಂದು ಬೆಳವಣಿಗೆ - ಕೇರಳದ ಕೆಲವು ಕೃಷಿಭವನಗಳು ಫೇಸ್ಬುಕ್ ಮೂಲಕ ಮಾಹಿತಿ ಪಸರಿಸುತ್ತಿರುವುದು. ಫೇಸ್ಬುಕ್ಕಿನ ಹುಡುಕು ಜಾಗದಲ್ಲಿ ಕೃಷಿಭವನ್ ಎಂದು ಟೈಪಿಸಿ ನೋಡಿ.
                ಕೃಷಿಭವನ ಎಂದರೇನೆಂದು ನಿಮಗೆ ಹೇಳಬೇಕು. ಸರಕಾರದ ಕೃಷಿ ಮತ್ತಿತರ ಇಲಾಖೆಗಳು ಕೊಡಮಾಡುವ ಸವಲತ್ತು - ಮಾಹಿತಿಗಳನ್ನು ಪೂರೈಸಲೆಂದೇ ಕೇರಳದ ಪ್ರತಿ ಪಂಚಾಯತಿನಲ್ಲಿ ಒಂದೊಂದು ಕೃಷಿಭವನವಿದೆ. ಒಬ್ಬರು ಕೃಷಿ ಅಧಿಕಾರಿ, ಇನ್ನೊಬ್ಬರು ಕೃಷಿ ಸಹಾಯಕರು - ಹೀಗೆ ಅಲ್ಲಿ ಸಿಬಂದಿಗಳಿರುತ್ತಾರೆ. ಇವರ ದೂರವಾಣಿ ನಂಬರುಗಳು ಪ್ರತಿವರ್ಷ ಫಾರ್ಮರ್ ಇನ್ಫಾರ್ಮೇಶನ್ ಬ್ಯೂರೋ ಪ್ರಕಟಿಸುವ ಫಾರ್ಮ್  ಗೈಡ್ನಲ್ಲಿರುತ್ತದೆ. ಈ ಫಾರ್ಮ್ ಗೈಡನ್ನು ಇವರ ಜಾಲತಾಣದಿಂದ (http://fibkerala.gov.in/index.php?option=com_ content&task=view&id=354&Itemid=124) ಪುಕ್ಕಟೆಯಾಗಿ ಇಳಿಸಿಕೊಳ್ಳಬಹುದು.
               ಕೃಷಿಭವನಗಳಲ್ಲಿ ಪಂಚಾಯತಿನೊಳಗೆ ಹಬ್ಬಿಸಬೇಕಾದ ಕೆಲವು ಸವಲತ್ತಿನ ಸುದ್ದಿಗಳು, ಕಾರ್ಯಕ್ರಮದ ಆಹ್ವಾನ ಇತ್ಯಾದಿಗಳಿವೆ. ಇವನ್ನೆಲ್ಲಾ ಮುದ್ರಿತ ಸಾಹಿತ್ಯ, ಆಮಂತ್ರಣ ತಯಾರಿಸಿ ಮನೆಮನೆ ಕಳಿಸುವುದು ಕಷ್ಟ. ಹಾಗೆಯೇ ಪಂಚಾಯತಿನೊಳಗಣ ಕೃಷಿಯ ಹೊಸ ಸುದ್ದಿ - ಸಾಧನೆಗಳಿರುತ್ತವೆ. ಈ ಸಂವಹನಕ್ಕಾಗಿ ಒಂದಷ್ಟಾದರೂ ಕೃಷಿಭವನಗಳು ಫೇಸ್ ಬುಕ್ಕಿನಂತಹ ಸಾಮಾಜಿಕ  ತಾಣ ಬಳಸಿರುವುದು ಮೆಚ್ಚತಕ್ಕದ್ದು.  
              ತರಕಾರಿಯ ಮಟ್ಟಿಗೆ ಪರಾವಲಂಬಿಯಾಗಿರುವ ಕೇರಳದಲ್ಲಿ ಇಂದು ಹಿತ್ತಿಲಲ್ಲಿ, ಶಾಲೆಯಲ್ಲಿ, ತಾರಸಿಯಲ್ಲಿ ತರಕಾರಿ ಬೆಳೆಸುವುದಕ್ಕೆ ಇನ್ನಿಲ್ಲದ ಪ್ರಾಧಾನ್ಯ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ, ರಾಜ್ಯದುದ್ದಕ್ಕೂ ಸಾವಯವ ಪ್ರಜ್ಞೆ ಗಣನೀಯವಾಗಿ ಹಬ್ಬಿದೆ. ನೂರಾರು ಶಾಲೆಯ ಪೋರರು ಅವರ ಅಪ್ಪ ಅಮ್ಮಂದಿರು ಬೆಳೆಸುವಂತಹದೇ ತರಕಾರಿ ಬೆಳೆಸುತ್ತಿದ್ದಾರೆ. ಈ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಲ್ಲುವುದು ಕೃಷಿ ಭವನ್ಗಳೇ. ಹೀಗಾಗಿ ಹೆಚ್ಚಿನ ಕೃಷಿಭವನಗಳ ಮುಖಪುಸ್ತಕ ಹಾಳೆ ತುಂಬಾ ಹಾಗಲ, ಪಡುವಲ, ಹರಿವೆ, ಕುಂಬಳ, ಕ್ಯಾಬೇಜುಗಳೇ ತುಂಬಿವೆ.
                ವಾಸ್ತವವಾಗಿ ಈ ಪುಟಗಳು ದ್ವಿಮುಖ ಸಂವಹನ ನಡೆಸಬೇಕಾಗಿತ್ತು. ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಇಷ್ಟರ ಮಟ್ಟಿಗೆ ಹಾರೈಕೆ ಇಟ್ಟುಕೊಳ್ಳುವುದೇ ತಪ್ಪೇನೋ! ಈ ವಿಚಾರಕ್ಕೆ ಬಂದಾಗ ನೆನಪಾಗುವುದು ನೆರೆಯ ಶ್ರೀಲಂಕಾದ ಕೃಷಿ ಇಲಾಖೆಯ ಜಾಲತಾಣ. ಅಲ್ಲಿನ ಜಾಲತಾಣವೊಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಕೈಪ್ ಮೂಲಕ ಮಾತಾಡಲು ಅವಕಾಶ ಕಲ್ಪಿಸಿದೆ. ನಮ್ಮಲ್ಲಿ ಮುಖ್ಯ ವಿಷಯಗಳಲ್ಲೂ ಕೆಲವೊಮ್ಮೆ ಫೋನ್ ಮೂಲಕ ಮಾತಾಡಲೂ ಕಷ್ಟವಾಗುತ್ತದೆ. ಪಾಪ, ಅವರಿಗೂ ಮೀಟಿಂಗ್, ಸೆಮಿನಾರ್, ವರದಿ ತಯಾರಿಯ ಬಿಸಿ...
             ಕೇರಳದಲ್ಲಿರುವಷ್ಟು ಸಾಕ್ಷರತೆ, ಕಂಪ್ಯೂ ಸಾಕ್ಷರತೆ ಕರ್ನಾಟಕದಲ್ಲಿಲ್ಲ ಎಂದು ವಾದಿಸಬಹುದು. ಇದು ಸರಿಯೂ ಹೌದು. ಆದರೂ ನಮ್ಮಲ್ಲಿ ಮಾಹಿತಿ ಹಂಚುವ ಕೆಲಸದಲ್ಲಿ, ಪರಸ್ಪರ ವಿನಿಮಯಕ್ಕೆ ಏಕೆ ಬಹುಮಾಧ್ಯಮ ಬಳಕೆಯಾಗುತ್ತಿಲ್ಲ? ನಮ್ಮ ವಿಶ್ವವಿದ್ಯಾಲಯಗಳೂ ಇನ್ನೂ ಪುಸ್ತಕ ಪ್ರಕಟಿಸಿ ಗೋದಾಮುಗಳಲ್ಲಿ ತುಂಬುವ ಕೆಲಸಕ್ಕೆ ಅಂಟಿಕೊಂಡಿದ್ದಾರೆಯೇ ಹೊರತು ಪುಟ್ಟದೊಂದು ವಿಡಿಯೋ ಆಗಲಿ, ಸಂವಹನದ ನೂತನ ವಿಧಾನಕ್ಕೆ ಕೈ ಹಾಕುವುದಾಗಲೀ ಇನ್ನೂ ಮಾಡಿಲ್ಲ. ಯಥಾ ಪ್ರೊಫೆಸರ್, ತಥಾ ವ್ಯವಸ್ಥೆ.
            ಕರ್ನಾಾಟಕದ ತೋಟಗಾರಿಕೆ ಮತ್ತು ಕೃಷಿಯ ಉನ್ನತಾಧಿಕಾರಿಗಳು, ಇಲಾಖಾ ಕಾರ್ಯದರ್ಶಿಗಳು ಕೇರಳದ ಫಾರ್ಮ್  ಇನ್ಫಾರ್ನೇಶನ್ ಬ್ಯೂರೋ ಕಚೇರಿಗೊಮ್ಮೆ ಭೇಟಿ ಕೊಟ್ಟು ಅಧ್ಯಯನ ಮಾಡಲಿ. ರಾಜ್ಯದ ಮೂಲೆಮೂಲೆಯ ಹಳ್ಳಿಗಳಿಗೆ ಹೋಗಿ ಇವರು ಬಹುಮಾಧ್ಯಮಗಳ ಮೂಲಕ ಬಿತ್ತರಿಸುವ ಮಾಹಿತಿ ರೈತರನ್ನು  ಹೇಗೆ ತಲಪುತ್ತಿದೆ, ಇದರಿಂದ ಏನಾದರೂ ಧನಾತ್ಮಕ ಬದಲಾವಣೆ ಆಗಿದೆಯೇ ಎನ್ನುವುದನ್ನು ಹಳ್ಳಿಗಳಲ್ಲೇ ಉಳಿದು ಅಭ್ಯಾಸ ಮಾಡಲಿ.  ಈ ತಂಡದಲ್ಲಿ ನಮ್ಮ ಕೆಲವು ಉತ್ಸಾಹಿ ಯುವ ಕೃಷಿಕರನ್ನೂ ಕರೆದೊಯ್ಯಲಿ.
             ಯಾವ್ಯಾವ ವಿಚಾರಕ್ಕೋ ದೂರದ ಊರುಗಳಿಗೆ ಅಧ್ಯಯನ ಪ್ರವಾಸ ನಡೆಯುತ್ತಿರುತ್ತಲ್ಲಾ. ದೂರಗಾಮಿ ಪ್ರಯೋಜನ ಪಡೆಯಬಹುದಾದ ಸಂವಹನ ಪ್ರಕ್ರಿಯೆಯ ಪುನರುಜ್ಜೀವನಕ್ಕಾಗಿ ನೆರೆಯ ರಾಜ್ಯಕ್ಕೊಮ್ಮೆ ಹೋಗಿ ಬರಲಿ. ನೀವೇನಂತೀರಿ?
- ಶ್ರೀ ಪಡ್ರೆ
shreepadre@gmail.com

(ಮಾರ್ಚ್ 2015 - ಮನದಾಳ )