Tuesday, November 5, 2019

ಕೇರಳದ ಮಳೆವಿಶ್ವಾಸಿ ಕೃಷಿಕರು







ಬೋರ್ ವೆಲ್ಲಿನದು ಮುಂದಿನ ಪೀಳಿಗೆಗೆ ಉಳಿಸಬೇಕಾದ ನೀರು. ನಾವು ಮಳೆಗೆ ಕೈಯೊಡ್ಡಿ ಹಿಡಿದಿರುವುದು ನಮ್ಮದೇ ನೀರು. ಇದನ್ನು ಯಾವುದೇ ಅಳುಕೂ ಇಲ್ಲದೆ ಬಳಸಬಹುದಲ್ಲಾ?”

l ಲೇ : ಶ್ರೀ ಪಡ್ರೆ


ಕುಂಞಿರಾಮನ್ ಸಂತೋಷದಿಂದಿದ್ದರು. ಅವರ ಹತ್ತು ಲಕ್ಷ ಲೀಟರಿನ ವಿಶಾಲ ಕೆರೆಯ ಬಳಿ ನಾವಿದ್ದೆವು. ಈ ಬೇಸಿಗೆ ಕೊನೆಗೆ ನಿರ್ಮಿಸಿದ ಈ ಮಳೆಕೊಳಕ್ಕೆ ಮೂರು ಲಕ್ಷ ರೂಪಾಯಿ ಖರ್ಚಾಗಿತ್ತು.
ಕೆರೆ ಕೆಲಸ ಮುಗಿದಂದಿನಿಂದ ದಿನ ಬೆಳಗಾದರೆ ಮೊದಲ ಕೆಲಸ ಏನು ಗೊತ್ತೇ? ಒಮ್ಮೆ ಕೆರೆಯ ಒಡಲು, ಮತ್ತೊಮ್ಮೆ ಆಕಾಶ ನೋಡುವುದು. ಇದು ದಿನಚರಿಯ ಭಾಗವೇ ಆಗಿಬಿಟ್ಟಿತ್ತು. ಯಾವಾಗಲೂ ಮಳೆ ಆರಂಭವಾಗುವ ಜೂನಿನಲ್ಲಿ ಈ ಬಾರಿ ಮಳೆಯೇ ಸರಿಯಾಗಿ ಆಗಲಿಲ್ಲ. ಜುಲೈ ಅರ್ಧ ಕಳೆದರೂ ಹೇಳುವಷ್ಟು ಮಳೆ ಇರಲಿಲ್ಲ. ಮನದೊಳಗೇ ಸಣ್ಣ ಆತಂಕ, ಪ್ರಾರ್ಥನೆ ಆರಂಭವಾಗಿತ್ತು.
ಏಳು ವಾರಗಳ ಅನುಮಾನ ಹಿಂದಿನ ವಾರವಷ್ಟೇ ಕರಗಿತ್ತು. ಚೆನ್ನಾಗಿ ಮಳೆ ಸುರಿದು ಕೊಳ ತುಂಬತೊಡಗಿತ್ತು. ಈ ಬಾರಿ ಮಳೆಗಾಲ ಸುರುವಾದದ್ದೇ ಜುಲೈ ಮಧ್ಯದಿಂದ.
ಜುಲೈ ತಿಂಗಳ ಕೊನೆಯ ವಾರ ಅದು. ನಮಗೆ ಕೆರೆ ತೋರಿಸುತ್ತಾ ಕುಂಞಿರಾಮನ್ ವಿವರಿಸಿದರು, “ ಒಂದು ಬಾವಿ ಮತ್ತು ಒಂದು ಬೋರ್ ವೆಲ್ ಇದೆ. ನೀರಾವರಿ ಆರಂಭಿಸುವಾಗ, ಅಂದರೆ ದಶಂಬರ - ಜನವರಿಯಲ್ಲಿ ಬಾವಿಯಿಂದ ನೀರೆತ್ತುತ್ತೇವೆ. ಅದು ಕಡಿಮೆ ಆಯಿತೆಂದಾಗ ಕೊಳವೆಬಾವಿಯದು. ಏನಿದ್ದರೂ ಫೆಬ್ರವರಿಯ ನಂತರವೇ ಕೊಳವೆಬಾವಿ ಚಾಲೂ. ಬರುವ ವರ್ಷ ಬೇಸಿಗೆಯಲ್ಲಿ ಈ ಮಳೆಕೊಳದ ನೀರು ಉಪಯೋಗಿಸುವ ಪ್ಲಾನ್. ಒಟ್ಟು ಮೂರು ತಿಂಗಳ ಅಗತ್ಯಕ್ಕೆ ತಕ್ಕಷ್ಟು ನೀರು ಈ ಕೊಳ ಕೊಡಬಹುದು ಅಂದುಕೊಂಡಿದ್ದೇವೆ.”
ಭವಿಷ್ಯದ ದೃಷ್ಟಿಯಿಂದ
ಕುಂಞಿರಾಮನ್   ಪಾಯಂ   ಎಂಬಲ್ಲಿನ ಕೃಷಿಕರು. ಇದು ಕಾಸರಗೋಡು ಜಿಲ್ಲೆಯ ಕುಂಡಂಕುಳಿಯಿಂದ ಕಾಲು ಗಂಟೆ ದೂರದ ಹಳ್ಳಿ. ಇವರು ಬೇಡಡ್ಕ ಫಾರ್ಮರ್ಸ್ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯದರ್ಶಿ. ಇರುವ ಜಮೀನು ನಾಲ್ಕೆಕರೆ. ಒಂದೂಕಾಲೆಕ್ರೆ ಅಡಿಕೆ. 500 ಮರ. ತೆಂಗು 100. ಉಳಿದಂತೆ ರಬ್ಬರ್.
ಯಾರೇ ಕೃಷಿಕರು ನೀರಿಗಾಗಿ ದೊಡ್ಡ ಮೊತ್ತ ವೆಚ್ಚ ಮಾಡಿದರು ಅಂದಾಗ ನಮಗೆ ಬರುವ ಮೊದಲ ಅನಿಸಿಕೆ, “ಬಹುಶಃ ಕಳೆದ ಸೀಸನಿನಲ್ಲಿ ನೀರಿನ ತೀವ್ರ ಕೊರತೆ ಅನುಭವಿಸಿರಬಹುದುಅಂತ. ಆದರೆ ಕುಂಞಿರಾಮನ್ ಈ ಚಿಂತನೆಗೆ ಅಪವಾದ. ಕಳೆದ ವರ್ಷದ ತೀವ್ರ ಬರದಲ್ಲೂ ಅವರಿಗೆ ನೀರಿನ ಅಭಾವ ಆಗಿರಲಿಲ್ಲ.
ಆದರೆ ಬೋರ್ ವೆಲ್ಲನ್ನು ನಂಬುವುದಕ್ಕೂ ಒಂದು ಪರಿಧಿ ಇದೆಯಲ್ಲಾ? ಇದೇ ಥರದ ಕಡು ಬೇಸಿಗೆಯಲ್ಲಿ ಮುಂದೆಂದಾದರೂ ಕೈಕೊಡದು ಎಂದು ಏನು ಗ್ಯಾರಂಟಿ ಇದೆ?  ಹಾಗಾಗಿ,  ಮುಂಜಾಗರೂಕತಾ ಕ್ರಮವಾಗಿ ಈ ಕೆರೆಎನ್ನುತ್ತಾರೆ ಅವರು. ಇವರು ಕೆರೆ ಮಾಡಿಸಿಕೊಂಡದ್ದು ಮನೆಯ ಮಟ್ಟದಿಂದ ಸ್ವಲ್ಪ ಕೆಳಗೆ. ಪೀವೀಸಿ ಕೋಟೆಡ್ ನೈಲಾನ್ ಫ್ಯಾಬ್ರಿಕ್ ಬಳಕೆ. ಇದು ಅತಿ ದಪ್ಪದ್ದು, 750 ಜೀ.ಎಸ್.ಎಂ.ನದು.
ಇವರು ನೀರು ಕೊಡುವುದು ಐದಾರು ದಿನಕ್ಕೆ ಒಮ್ಮೆ. ಹೋಸ್ ಇರಿಗೇಶನ್. ಒಟ್ಟು 500 ತೆಂಗಿನ ಮರಗಳಿವೆ. ದಿನಕ್ಕೆ 80 ಮರಗಳ ಒಂದು ವಿಭಾಗಕ್ಕೆ ನೀರುಣಿಕೆ. ಆರು ದಿನಕ್ಕೊಮ್ಮೆ ಪಾಳಿ ಮುಗಿಯುವಂತಹ ಪ್ಲಾನಿಂಗ್.
ಮಳೆಕೊಳದ ಹೊಳಹು ಹಾಕುವ ಮೊದಲು ಇನ್ನೊಂದು ಕೊಳವೆಬಾವಿ ತೋಡಿಸಿದರೆ ಹೇಗೆ ಎನ್ನುವ ಆಲೋಚನೆ ಇತ್ತಂತೆ. ಸಾಕಷ್ಟು ಚಿಂತನ ಮಂಥನದ ನಂತರ ಉಳಿದದ್ದು ಎರಡೇ ಪ್ರಶ್ನೆ. “ಒಂದೊಮ್ಮೆ ನೀರು ಸಿಗದಿದ್ದರೆ? ಅಥವಾ ಸಿಕ್ಕರೂ ಎಷ್ಟು ವರ್ಷ ನೀರು ಕೊಟ್ಟೀತು ಎನ್ನಲು ಸಾಧ್ಯವೇ?” ಈಯೆರಡೂ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ ನಿಶ್ಚಿತವಾಗಿ ನೀರು ಸುರಿಸುವ ಮಳೆರಾಯ ಇಷ್ಟದವನಾದ. “ಈ ಭಾಗದಲ್ಲಿ ಹೇಗಿದ್ದರೂ 3,500 ಮಿಲ್ಲಿಮೀಟರ್ ಮಳೆಗೆ ಅಡ್ಡಿಯಿಲ್ಲ. ಅಂದರೆ ನೇರ ಆಕಾಶವೇ ಮೂರೂವರೆ ಮೀಟರ್ ನೀರು ತುಂಬಿಕೊಟ್ಟೀತಲ್ಲಾ?”....

ಈ ಲೇಖನದ ಪೂರ್ಣ ಪಾಠ ಜಾಲತಾಣದಲ್ಲಿದೆ – www.adikepatrike.com


No comments:

Post a Comment