Tuesday, November 5, 2019

ಇಂಗಿಸುವುದೋ? ಕೂಡಿಡುವುದೋ?

(Editorial)

ರಕ್ಕೆ ಭೇದಭಾವ ಇಲ್ಲ, ಬಯಲುಸೀಮೆ, ಮಲೆನಾಡು, ಬಡವ - ಬಲ್ಲಿದ ಎಂದು ಅದು ತಾರತಮ್ಯ ಮಾಡುವುದಿಲ್ಲ. ನೀರೆಚ್ಚರ ಇಲ್ಲದವರ ಜಮೀನಿನಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಮಳೆ ಕಡಿಮೆಯಾದಲ್ಲಿ ವ್ಯಾಪಕವಾಗಿ ಸಮಸ್ಯೆ ಮೂಡಿಸುತ್ತದೆ.
ಕ್ಷಾಮದೇವರ ಭೇಟಿ ಹೆಚ್ಚುತ್ತಿರುವ ಕಾರಣ ಜಲಸಂರಕ್ಷಣಾ ಪ್ರಜ್ಞೆ ಏರುಗತಿ ಕಾಣುತ್ತಿದೆ. ಮಳೆಕೊಯ್ಲು, ಮರುಪೂರಣದಂತಹ ಪದಗಳು ಊರಲ್ಲೂ, ಮಾಧ್ಯಮಗಳಲ್ಲೂ ಗಟ್ಟಿಯಾಗಿ ಕೇಳಬರುತ್ತಿದೆ.
ಕೆರೆ ನಿರ್ಮಿಸಿ ಪ್ಲಾಸ್ಟಿಕ್ ಶೀಟ್ ಹೊದೆಸಿ ಮಳೆನೀರು ಸಂಗ್ರಹಿಸುವ ಕ್ರಮ ಜನಪ್ರಿಯವಾಗಿದೆ. ಇದನ್ನು ಮಾಡಿಕೊಡುವ ಏಜೆನ್ಸಿಗಳೂ ಧಾರಾಳ ಇವೆ. ಮಳೆನೀರಲ್ಲದೆ ಮಳೆಗಾಲದಲ್ಲಿ ಕೆರೆ, ಬೋರ್ ವೆಲ್ಲಿನ ನೀರನ್ನು ಇಂತ ಕೆರೆಯಲ್ಲಿ ತುಂಬಿ ಬೇಸಿಗೆಯಲ್ಲಿ ಬಳಸುವವರಿದ್ದಾರೆ. ಬಯಲುಸೀಮೆಯಲ್ಲಿ ಈ ರೀತಿಯ ಕೆರೆ ಮಾಡಿ ಮಳೆ ಹಿಡಿದೋ, ಬೇರೆ ಮೂಲದ ನೀರು ಕೂಡಿಟ್ಟೋ ಬದುಕು ಗಟ್ಟಿಯಾಗಿಸಿದವರೂ ಇದ್ದಾರೆ.
ಒಂದಷ್ಟು ಆವಿಯಿಂದಾಗುವ ನಷ್ಟ ಬಿಟ್ಟರೆ, ಶೇಖರಿಸಿಟ್ಟ ಉಳಿದೆಲ್ಲಾ ನೀರು ಅವರವರ ಬಳಕೆಗೆ ಖಂಡಿತ ಸಿಗುತ್ತದೆ ಎನ್ನುವುದು ಮಳೆಕೆರೆಗಳ ದೊಡ್ಡ ಆಕರ್ಷಣೆ. ಆದರೆ ಇದಕ್ಕೆ ಬಂಡವಾಳ ಹೆಚ್ಚು ಬೇಕು. ಸಿಲ್ಪಾಲಿನ್ ಶೀಟು ಕಾಲಕ್ರಮದಲ್ಲಿ ಸೋರತೊಡಗಿ ಪುನಃ ಪುನಃ ಅದಕ್ಕಾಗಿ ಹಣ ಹೊಂದಿಸಬೇಕಾದ ದುರವಸ್ಥೆ ಹಲವರದು. ಹೋಲಿಸಿ ನೋಡಿದರೆ, ನೀರಿಂಗಿಸಲು ತಗಲುವ ವೆಚ್ಚ ಕಮ್ಮಿ. ನಿರ್ವಹಣೆಯ ಯತ್ನವೂ ಕಮ್ಮಿ ಸಾಕು.
ಈ ಗೊಂದಲ ಸಹಜ - ಯಾವುದು ಹಿತ ನಮಗೆ? ಇಂಗಿಸುವುದೋ? ಶೇಖರಿಸಿಡುವುದೋ?
ಈ ಪ್ರಶ್ನೆಗೆ ಎಲ್ಲರಿಗೂ, ಎಲ್ಲೆಡೆಗೂ ಸಲ್ಲುವ ಒಂದೇ ಉತ್ತರ ಇಲ್ಲ. ಅದು ಅಲ್ಲಲ್ಲಿ ಕೊರತೆ ಇರುವ ನೀರಿನ ಪ್ರಮಾಣ, ಆಯಾಯಾ ಕಿರು ಇಳಿಮೇಡಿನ (ಮೈಕ್ರೋ ವಾಟರ್ ಶೆಡ್) ಒಟ್ಟಾರೆ ಸ್ಥಿತಿಗತಿ, ಮಳೆಕೊಯ್ಲಿಗೆ ಇರುವ ಅನುಕೂಲತೆ - ಅನನುಕೂಲತೆಗಳು, ಬೀಳುವ ಮಳೆಯ ಪ್ರಮಾಣ ಮತ್ತು ವಿತರಣೆ - ಹೀಗೆ ಹಲವು ಮೂಲ ಅಂಶಗಳನ್ನು ಹೊಂದಿಕೊಂಡು ಇದೆ.
ಮರುಪೂರಣದಿಂದ ಗುಣ ಹೊಂದಬೇಕಾದರೆ ಎರಡು ಮೂಲ ಅನುಕೂಲತೆ ಬೇಕು. ನಮ್ಮ ಜಲಮೂಲಗಳಲ್ಲಿ ನೀರಿನ ಲಭ್ಯತೆ ಹೆಚ್ಚಬೇಕೆಂದರೆ ಅದೇ ಕಿರು ಇಳಿಮೇಡಿನಲ್ಲಿ (ಅದರ ಪಕ್ಕದ, ಅದರ ಕಡೆಗೇ ನೀರಿಳಿದು ಬರುವ ಎತ್ತರದ ಜಾಗದಲ್ಲಿ ಎಂದು ಸರಳವಾಗಿ ಹೇಳಬಹುದು) ನೀರು ಇಂಗಿಸುವ ರಚನೆ ಮಾಡಿಕೊಳ್ಳುವ ಸ್ಥಳ ಮತ್ತು ಅನುಕೂಲತೆ ಬೇಕು. ಅಷ್ಟು ಮಾತ್ರ ಸಾಲದು, ಅಲ್ಲಿ ಮೇಲಿನಿಂದ ಇಳಿದು ಹರಿದುಹೋಗುವ ಮಳೆನೀರು ಅಗತ್ಯದಷ್ಟು ಇರಬೇಕು. ಆಯಾಯಾ ಭೌಗೋಳಿಕ ಸ್ಥಿತಿಗತಿ, ಮಣ್ಣಿನ ಅಡಿಪದರಗಳೂ ಇದಕ್ಕೆ ಪೂರಕವಾಗಿರಬೇಕು. ಇಂಥ ಜಾಗದಲ್ಲಿ ಮೇಲುಭೂಮಿಯಲ್ಲಿ ಓಡುವ ಮಳೆನೀರನ್ನು ಚೆನ್ನಾಗಿ ತಡೆದು ಇಂಗಿಸಿಬಿಟ್ಟರೆ ಸಾಕಾಗಬಹುದು.
ನೀರಿಂಗಿಸುವುದರಲ್ಲಿ ಸಾಮಾಜಿಕ ನ್ಯಾಯ ಇದೆ. ಏಕೆಂದರೆ ಇಳಿದು ಹೋಗಿರುವ ಜಲಮಟ್ಟವನ್ನು ಅದು ಏರಿಸತೊಡಗುತ್ತದೆ. ನಮಗೂ ಪ್ರಯೋಜನ, ನೆರೆಕರೆ, ಹತ್ತಿರದ ಹಳ್ಳ - ಎಲ್ಲವಕ್ಕೂ, ಬೇರೆಬೇರೆ ಅನುಪಾತದಲ್ಲಾದರೂ.
ಬಯಲುಸೀಮೆಯ ಕಡಿಮೆ ಮಳೆಯ ಪ್ರದೇಶಗಳಲ್ಲಿ ಇಂಗಿಸಿದ ನೀರನ್ನು ಅವರವರು ತೃಪ್ತಿಕರವಾಗಿ ಹಿಂಪಡೆಯುವ ಅನುಕೂಲತೆ ಇಲ್ಲದಿರಬಹುದು. ಮಳೆ ಅಲ್ಲದಿದ್ದರೂ ಕೆರೆ - ಬೋರ್ವೆಲ್ಲುಗಳಿಂದ, ಹತ್ತಿರದ ಹಳ್ಳದಿಂದ  ಮಳೆಗಾಲದಲ್ಲಿ ನೀರು ತುಂಬಿಟ್ಟರೆ ಪ್ರಯೋಜನ ಆಗುವಂಥ ಸ್ಥಿತಿ ಇರಬಹುದು. ಅಂಥಲ್ಲೆಲ್ಲಾ ನೀರು ಸಂಗ್ರಹಣಾ ಟಾಂಕಿ ಉಪಯೋಗಿ. ಆ ಆಯ್ಕೆಯೂ ಉಚಿತವಾದುದೇ.
ಮಲೆ(ಳೆ)ನಾಡಿನಲ್ಲೂ ಮಳೆಕೊಳ ನಿರ್ಮಾಣ ಕೆಲವೆಡೆ ಸರಿಯಾದ ನಿರ್ಣಯ ಅನಿಸಬಹುದು. ನೀರಿಂಗಿಸಿ ಪ್ರಯೋಜನ ತೆಗೆದುಕೊಳ್ಳುವ ಅನುಕೂಲತೆ ಇಲ್ಲದಲ್ಲಿ. ಆದರೆ ಒಂದು ಜಲಾನಯನದ  ನೂರಾರು ಕುಟುಂಬಗಳು, ಅಂದರೆ, ಸಾಮೂಹಿಕವಾಗಿ ಹೆಚ್ಚಿನ ಮಳೆನೀರಿಂಗಿಸುವ ಕೆಲಸ ಮಾಡಿದಲ್ಲಿ ನಮಗೆ ಈ ಮಳೆನೀರು ಶೇಖರಣಾ ಟಾಂಕಿಯ ಅಗತ್ಯವೇ ಬೀಳದು. ಈಗ ಮೂರೂವರೆ ಸಾವಿರ ಮಿ.ಮೀ. ಮಳೆಯ ಊರಿನಲ್ಲೂ ಸಾಮೂಹಿಕ ಮರುಪೂರಣ ಮಾತ್ರ ನೀರ ನಿಶ್ಚಿಂತೆ ತರಲು ಸಾಧ್ಯ. ಏಕೆಂದರೆ, ನಾವು ಜಲಮಟ್ಟವನ್ನು ಪಾತಾಳಕ್ಕೆ ಇಳಿಸಿದ್ದೇವೆ - ಎಲ್ಲರೂ ಒಗ್ಗೂಡಿ!
ಇನ್ನೊಂದು ವಿಷಯ ಇಲ್ಲಿ ಹೇಳಲೇಬೇಕು. ಜಲಸಂರಕ್ಷಣೆಯ ವಿಚಾರಕ್ಕೆ ಬಂದಾಗಲೂ ನಮ್ಮವರು ಕಾಣುವ ನೀರನ್ನು (ವಿಸಿಬಲ್ ವಾಟರ್) ನಂಬುವಷ್ಟು ಏರಿದ ಜಲಮಟ್ಟ, ಇಂಗಿದ ನೀರಿನಂತಹ ಕಾಣಿಸದ ನೀರಿನ (ಹಿಡನ್ ವಾಟರ್) ಬಗ್ಗೆ ವಿಶ್ವಾಸ ತಳೆಯುವುದಿಲ್ಲ. ಜಲಚಕ್ರವೆಂಬ ಸರಳ ಪ್ರಕ್ರಿಯೆಯನ್ನು ಅರ್ಥಮಾಡುವ ಗೋಜಿಗೆ ಹೋಗುವುದಿಲ್ಲ. ಮಣ್ಣಿನ ತೇವಾಂಶ, ಫಲವತ್ತತೆಗಿಂತಲೂ ಮೋಟಾರು ಕಕ್ಕುವ ನೀರು, ಕೆರೆಯಲ್ಲಿ ತುಂಬಿಕೊಂಡ ನೀರೇ ಹೆಚ್ಚು ಪ್ರೀತಿ.  ಈ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ, ನಾವು ತಪ್ಪು ನಿರ್ಧಾರ ಮಾಡಿ ಪರಿತಪಿಸಬೇಕಾಗಬಹುದು. ನೀರು ಬತ್ತುವ, ಮನುಷ್ಯ ಯತ್ನದಿಂದ ಮತ್ತೆ ಸಮೃದ್ಧವಾಗುವ ಬಗ್ಗೆ, ಈ ಕೆಲಸದಲ್ಲಿ ನೆಲ ಜಲ ಅರಣ್ಯಗಳ ಪಾತ್ರದ ಬಗ್ಗೆ, ಪ್ರಾಥಮಿಕ ಅರಿವು ಮಾಡಿಕೊಳ್ಳುವುದು ಅನಿವಾರ್ಯ.

- ಶ್ರೀ ಪಡ್ರೆ
shreepadre@gmail.com

No comments:

Post a Comment